
ಮೈಸೂರೆಂಬ ಒಂದು ಸುಂದರ ಊರಿಂದ ಶುರುವಾಯಿತು ಈ ನನ್ನ ಜೀವನ. ಅಲ್ಲಿಂದ ಶುರುವಾದ ಈ ನನ್ನ ಜೀವನ ಬೆಂಗಳೂರೆಂಬ ಕಣ್ಣು ಕುಕ್ಕುವ, ಬಲು ಜನನಿಭಿಢ ಸ್ಥಳಕ್ಕೆ ಇಂದು ಬಂದು ನಿಂತಿದೆ. ಏಕೆ ನಿಂತಿದೆ, ಹೇಗೆ ನಿಂತಿದೆ ಎಂಬುದು ನನ್ನ ಮನಸ್ಸಿನಲ್ಲಿರುವ ವಸ್ತು ವಿಷಯ. ಎಲ್ಲರಂತೆಯೇ ತಂದೆ-ತಾಯಿಯೊಡನೆ ಜೊತೆಗೂಡಿ, ಅಣ್ಣನೊಂದಿಗೆ ಆಟವಾಡುತ್ತಾ, ಜಗಳವಾಡುತ್ತಾ ಬೆಳದ ನಾನು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಾಲೆಯನ್ನು ಮುಗಿಸಿ, ಇಂಗ್ಲಿಷ್ ಮಾಧ್ಯಮದಲ್ಲಿ ಹೈ-ಸ್ಕೂಲ್ ಹಾಗೂ ಕಾಲೇಜ್ ವಿದ್ಯಾಭ್ಯಾಸವನ್ನು ಮುಗಿಸಿ ಕಂಪ್ಯೂಟರ್ ಶಿಕ್ಷಣವನ್ನು ಪಡೆದು, ಸಾಫ್ಟ್ ವೇರ್ ಇಂಜಿನಿಯರ್ ಎಂಬ ಪದವಿ ಪಡೆದು ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲು ಕೆಲಸ ಮಾಡುತ್ತಿದ್ದೇನೆ. ವಿದ್ಯಾಭ್ಯಾಸ ಮುಗಿಸುವವರೆಗೆ ಜವಾಬ್ದಾರಿ ಏನೆಂಬುದನ್ನು ಅರಿಯದೆ ಆಟವಾಡುತ್ತಾ ಸಾಗಿತು ನನ್ನ ಜೀವನ. ಮಧ್ಯದಲ್ಲಿ ಎಷ್ಟೋ ಭಾವನೆಗಳ ಸಂಘರ್ಷದೊಂದಿಗೆ ಬದುಕು ಎಂದರೇನು, ಸ್ನೇಹ ಹಾಗೂ ಪ್ರೀತಿ ಎಂದರೇನು ಎಂಬುದನ್ನು ಅರಿಯುತ್ತಾ ಬೆಳೆದೆ. ಬುದ್ದಿಯು ಬಲಿಯುತ್ತಾ, ಕಾಲವು ಕಳೆಯುತ್ತಾ ಜೀವನ ಎಂದರೇನು ಎಂಬ ವಿಷಯವು ಪ್ರಶ್ನೆಯಾಗತೊಡಗಿದೆ.
ಜೀವನ ಎಂದರೇನು? ತುಂಬಾ ದಿವಸದಿಂದ ಈ ಪ್ರಶ್ನೆಯು ನನ್ನ ತಲೆಯಲ್ಲಿ ಸರಿದಾಡುತ್ತಿದೆ. ಈ ಪ್ರಶ್ನೆಯು ಆಳವಾಗಿ ಮನಸ್ಸನ್ನು ಹೊಕ್ಕಲು ಅದರ ಬೇರು ದೇಹವನ್ನೆಲ್ಲಾ ಆಕ್ರಮಿಸತೊಡಗಿದೆಯೇನೋ ಎಂಬ ಭಾವ ನನ್ನಲ್ಲಿ ಮೂಡುತಿದೆ.ಈ ಭಾವದ ಜೊತೆಗೆ ಹಲವಾರು ಪ್ರಶ್ನೆಗಳು ಸಹ ನನ್ನ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದೆ. ಈ ಜೀವನ ಎಂದರೇನು? ಎಂಬ ಪ್ರಶ್ನೆಗೆ ಹಲವಾರು ಪ್ರಶ್ನೆಗಳು ಉತ್ತರವಾಗಿ ಕಾಣುತ್ತಿದೆ. ಎಷ್ಟೇ ಉತ್ತರ ನೀಡಿದರು ಸಂಪೂರ್ಣ ಉತ್ತರ ಸಿಗಲಿಲ್ಲವೆಂಬ ಭಾವ. ಈ ಪ್ರಶ್ನೆ ಹಾಗೂ ಉತ್ತರಗಳ ಕಲಹದಲ್ಲ ನನಗನ್ನಿಸಿದ ಎಷ್ಟೋ ವಿಷಯಗಳನ್ನು ಬರೆಯಬೇಕಾಗಿ ಎಷ್ಟೋ ಸಲ ಅನ್ನಿಸಿದ್ದರೂ ಅದಕ್ಕೆ ಒಂದು ಸ್ಪಷ್ಟ ಚಿತ್ರ ನೀಡಲು ಸಾಧ್ಯವಾಗಿರಲಿಲ್ಲ. ಆ ವಿಷಯಗಳಿಗೆ ಒಂದು ಚಿತ್ರವನ್ನು ನೀಡುವ ಪ್ರಯತ್ನವೇ ಈ ಬರವಣಿಗೆ.
ಹುಟ್ಟಿದ ಕೆಲವು ದಿನಗಳಿಗೆ ಮಾತು ಬರದೆ ಹೇಳಲು ಆಗದೆ ತನಗೆ ಏನು ಬೇಕೆಂಬುದನ್ನು ಸಂಘ್ನೆಯಲ್ಲಿ ಅಮ್ಮನಿಗೆ ಮಾಡಿತೋರಿಸಿ ಪಡೆಯುವುದರಲ್ಲಿದೆಯಾ ಜೀವನ? ಅಂಬೆಗಾಲಿನಿಂದ ಹಿಡಿದು ನಡೆದು, ಓಡುವುದರಲ್ಲಿದಯಾ ಜೀವನ? ಮಾತು ಕಲಿತು ಅಮ್ಮನೊಂದಿಗೆ ಮೊದಲು ಪ್ರೀತಿಯಿಂದ ನಂತರ ಗದರುಮಾತಿನಲ್ಲಿದಯಾ ಜೀವನ? ಜೀವನದುದ್ದಕ್ಕೂ ಎದುರಾಗುವ ಪರೀಕ್ಷೆಗಳಲ್ಲಿ ಸೋಲುವುದು ಅಥವಾ ಗೆಲ್ಲುವುದರಲ್ಲಿದೆಯಾ ಜೀವನ? ಸ್ನೇಹದಲ್ಲಿ ಮುಳುಗಿ ಅದರ ನೋವು ಸುಖಗಳನ್ನು ಅನುಭವಿಸಿ, ಪ್ರೀತಿಯ ಬಿಸಿಲು ಕುದುರೆಯನ್ನು ಏರಿ ಅದು ಕರೆದೊಯ್ಯುವ ಕಡೆ ಹೋಗುವುದಾ ಜೀವನ? ಇಲ್ಲಿಯವರೆಗೂ ಅನುಭವಿಸಿದ ಕಷ್ಟ ನೋವುಗಳ ಸರಪಣಿಗಳೂ ಸಾಕು ಎಂದು ವೃತ್ತಿಪರ ಶಿಕ್ಷಣದಲ್ಲಿ ತೊಡಗಿ, ಕೆಲಸಕ್ಕೆ ಸೇರಿದ ಒಂದೆರಡು ತಿಂಗಳುಗಳಲ್ಲಿ ಅದರ ರುಚಿ ಒಗರೆಂದು ತಿಳಿದು, ಮೊದಲು ಕೆಲವು ಸಂಬಳದ ಹಣವನ್ನು ಮನಸ್ಸು ಬಂದಂತೆ ಖರ್ಚು ಮಾಡಿ, ತಂದೆ-ತಾಯಿಗೆ, ಅಣ್ಣನಿಗೆ, ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡುವುದಾ ಜೀವನಾ? ಸಮಯ ಕಳೆದಂತೆ ವೃತ್ತಿಯೂ ಸಹ ಒಂದು ದಿನಚರಿಯಾಗಿ, ದೈನಂದಿನ ಕೆಲಸಗಳನ್ನು ಮಾಡುವಂತೆ, ವೃತ್ತಿಯನ್ನೂ ಸಹ ಒಂದು ಯಂತ್ರದಂತೆ ನಿರ್ವಹಿಸುವುದು ಜೀವನಯಾ?? ಯಾವುದು ಜೀವನ??
ಜೀವನವೆಂಬುದು ಆಸಕ್ತಿಯಾ??? ಗೊತ್ತಿಲ್ಲ!!! ಹೀಗಿದ್ದಲ್ಲಿ ಯಾವುದರಲ್ಲೂ ಆಸಕ್ತಿಯಿಲ್ಲದಿದ್ದರೆ ಜೀವನೆವೇ ಮುಗಿದುಹೋಯಿತಾ? ಯಾವುದಾದರೊಂದು ವಿಷಯದ ಬಗೆಗಾಗಲಿ. ಕೆಲಸದ ಬಗೆಗಾಗಲಿ ಆಸಕ್ತಿಯು ಏರಿಳಿತವಿಲ್ಲದೆ ಸಮವಾಗಿರುವುದು ಸಾಧ್ಯವೇ? ಹಳೆಯ ಕಹಿ ಘಟನೆಗಳನ್ನು ಮರೆಯುತ್ತಾ, ಸ್ನೇಹಿತರೊಂದಿಗೆ ಜೊತೆಗೂಡಿ ಕಳೆದ ಸಮಯವನ್ನು ನೆನೆಯುತ್ತಾ ಇಂದಿನ ಸ್ಥಿತಿಯನ್ನು ಶಪಿಸುತ್ತಾ, ಭವಿಷ್ಯತ್ತನ್ನು ಕಾಯುವುದು ಜೀವನವಾ? ಯಾವುದು ಜೀವನ??
ಹೀಗೆ ಹಲವಾರು ಪ್ರಶ್ನೆಗಳು. ಈ ಜೀವನದ ಬಗೆಗಿನ ಚರ್ಚೆಯಲ್ಲಿ ನನ್ನ ಮನಸ್ಸಿನ ಅಂಗಳದಲ್ಲಿ ಒಗಟುಗಳು ಅಲೆ ಅಲೆಯಾಗಿ ಒಗಟುಗಳು ಮೂಡುತ್ತಿವೆ. ದುಃಖಗೊಂಡಾಗ ಅಲೆಗಳು ಮನಸ್ಸನ್ನು ಪದೇ-ಪದೇ ಅಪ್ಪ್ಳಿಸುತ್ತಾ ಘಾಸಿಗೊಳಿಸುತ್ತಾ, ಸಂತೋಷವಾದಾಗ ಒಂದು ಉಲ್ಲಾಸದ ಭಾವನೆಯು ಮನಸ್ಸನ್ನು ತುಂಬಿಕೊಳ್ಳೂತ್ತದೆ. ಹೀಗೆ ನನ್ನ ಮನಸ್ಸಿನಲ್ಲಿ ಜೀವನದ ಬಗೆಗಿನ ಸತ್ಯಾನ್ವೇಷಣೆ ಶುರುವಾಗಿದೆ. ಈ ಅನ್ವೇಷಣೆಯು ಯಾವ ಮಟ್ಟಕ್ಕೇರಿ ಯಾವ ದಿಕ್ಕು ಹಿಡಿದು ಎಲ್ಲಿಗೆ ಮುಟ್ಟುತ್ತದೋ ನಾ ಕಾಣೆ. ಅಲ್ಲಿಯವರೆಗೆ ಜೀವನದ ಪಯಣದಲ್ಲಿ ನನ್ನ ಪಯಣ ಸಾಗುತ್ತಿರುತ್ತದೆ…..


